ಅಕ್ಕಿಹಿಟ್ಟನ್ನು ಉಪಯೋಗಿಸಿ ಪೂರಿಯಂತೆ ಉಬ್ಬಿರುವ ರೊಟ್ಟಿ ಈ ಉಬ್ಬುರೊಟ್ಟಿ/ಎಣ್ಣೆರೊಟ್ಟಿಯು ಮಲೆನಾಡಿನ ಸಾಂಪ್ರದಾಯಕ ತಿಂಡಿಗಳಲ್ಲೊಂದು.

ಮಳೆಗಾಲದಲ್ಲಿ ಸಂಜೆಯ ಕಾಫಿ/ಟೀಯೊಂದಿಗೆ ಬಿಸಿ ಬಿಸಿಯಾಗಿ ಉಬ್ಬುರೊಟ್ಟಿಯನ್ನು ತಿನ್ನುತ್ತಿದ್ದರೆ ಅದರ ಮಜಾನೆ ಬೇರೆ. ಬನ್ನಿ, ಇನ್ನೇಕೆ ತಡ? ಹೇಗೆ ಮಾಡುವುದು ನೋಡೋಣ?

ಬೇಕಾಗುವ ಪದಾರ್ಥಗಳು:

ಅಕ್ಕಿಹಿಟ್ಟು- 2 ಲೋಟ

ಬೆಣ್ಣೆ- 1 ಸಣ್ಣ ನಿಂಬೆಹಣ್ಣಿನ ಗಾತ್ರ

ತೆಂಗಿನ ತುರಿ- 1 ಹೋಳಿಗೂ ಸ್ವಲ್ಪ ಕಡಿಮೆ

ಹಸಿರು ಮೆಣಸಿನ ಕಾಯಿ- 3-4

ಜೀರಿಗೆ- ಕಾಲು ಚಮಚ

ಎಣ್ಣೆ- ಕರಿಯಲು

ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಮೊದಲು ಕಾಯಿ ತುರಿ, ಹಸಿರುಮೆಣಸಿನ ಕಾಯಿಯನ್ನು ಸ್ವಲ್ಪ ನೀರು ಸೇರಿಸಿಕೊಂಡು ಚಟ್ನಿಯ ಹದಕ್ಕೆ ನುಣ್ಣಗೆ ರುಬ್ಬಿಕೊಳ್ಳಿ.

ಎರಡು ಲೋಟ ಅಕ್ಕಿಹಿಟ್ಟನ್ನು ಒಂದು ಅಗಲವಾದ ಪಾತ್ರೆಗೆ ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾಲು ಚಮಚ ಜೀರಿಗೆಯನ್ನು ಹಾಕಿ, ಬೆಣ್ಣೆಯನ್ನು ಹಾಕಿ ಕಲಸಿಕೊಳ್ಳಿ.

Pic 1

ಈಗ ಅಕ್ಕಿಹಿಟ್ಟಿಗೆ ಮೊದಲು ರುಬ್ಬಿದ್ದನ್ನು ಸೇರಿಸಿಕೊಂಡು ಬೇಕೆಂದಲ್ಲಿ ಸ್ವಲ್ಪ ನೀರನ್ನೂ ಹಾಕಿಕೊಂಡು, ಸುಮಾರಾಗಿ ಅಕ್ಕಿಹಿಟ್ಟಿನ ರೊಟ್ಟಿಯ ಹದದಲ್ಲಿ ಕಲಸಿಕೊಳ್ಳಿ. (ಹಿಟ್ಟನ್ನು ಕಲಸಿ ಸ್ವಲ್ಪ ಸಮಯ ಬಿಡುವ ಅಗತ್ಯವೇನೂ ಇಲ್ಲ. ಕೂಡಲೇ ಮಾಡಬಹುದು).

ನಂತರ ಅದನ್ನು ನಿಂಬೆಗಾತ್ರದಷ್ಟು ದೊಡ್ಡ ಉಂಡೆಗಳನ್ನಾಗಿ ಮಾಡಿಕೊಳ್ಳಿ.

Pic 2

ಎರಡು ಪ್ಲಾಸ್ಟಿಕ್ ಶೀಟ್ ಗಳಿಗೆ ಒಂದೆರಡು ಹನಿ ಎಣ್ಣೆಯನ್ನು ಸವರಿ, ಒಂದೊಂದೇ ಉಂಡೆಯನ್ನಿಟ್ಟು ಪೂರಿಯಷ್ಟು ದೊಡ್ಡದಾಗಿ ಕೈಯಲ್ಲಿ ತಟ್ಟಿಕೊಳ್ಳಿ. ತುಂಬಾ ತೆಳ್ಳಗೆ ತಟ್ಟಿದರೆ ಅದು ಉಬ್ಬುವುದಿಲ್ಲ.

Pic 3

ಮನೆಯಲ್ಲಿ ಚಪಾತಿ ಪ್ರೆಸ್ ಇರುವವರು, ಎಣ್ಣೆ ಸವರಿದ ಪ್ಲಾಸ್ಟಿಕ್ ಶೀಟ್ ಮದ್ಯೆ ಉಂಡೆಯನ್ನಿಟ್ಟು ತುಂಬಾ ಮೆಲ್ಲನೆ ಚಪಾತಿ ಪ್ರೆಸ್ ನ್ನು ಒತ್ತಿದರೆ, ಒಂದೇ ಬಾರಿಗೆ ವೃತ್ತಾಕಾರದಲ್ಲಿ ಬರುತ್ತದೆ. ಪುನ: ಕೈಯಲ್ಲಿ ತಟ್ಟುವ ಅಗತ್ಯವಿಲ್ಲ.

ಸ್ಟವ್ ಮೇಲೆ ಫ್ರೈಯಿಂಗ್ ಪ್ಯಾನ್ ಇಟ್ಟು ಎಣ್ಣೆ ಹಾಕಿ ಕಾದಾಗ ಲಟ್ಟಿಸಿದ ಹಾಳೆಗಳನ್ನು ಒಂದೊಂದೇ ಎಣ್ಣೆಗೆ ಬಿಡಿ. ಅದು ಉಬ್ಬಬೇಕೆಂದರೆ, ಎಣ್ಣೆಯ ಸಟ್ಟುಗದಲ್ಲಿ ಮೇಲಿಂದ ಮೇಲೆ ಪ್ಯಾನ್ ನಲ್ಲಿ ಕಾದಿರುವ ಎಣ್ಣೆಯನ್ನು ಆ ಹಾಳೆಯ ಮೇಲೆ ಹಾಕುತ್ತಲಿರಿ. ಆಗ ಎಣ್ಣೆಗೆ ಬಿಟ್ಟ ಹಾಳೆಯು ಚೆನ್ನಾಗಿ ಉಬ್ಬುತ್ತದೆ. ಈಗ ಉರಿಯನ್ನು ಸ್ವಲ್ಪ ಕಡಿಮೆ ಮಾಡಿ.

ಸ್ವಲ್ಪ ಹೊಂಬಣ್ಣ ಬರುವವರೆಗೆ ಕರಿದು ಈಚೆ ತೆಗೆಯಿರಿ. ರುಚಿಯಾದ, ಬಲು ಮೃದುವಾದ ಬಿಸಿಬಿಸಿ ಉಬ್ಬುರೊಟ್ಟಿ ತಿನ್ನಲು ಸಿದ್ಧ. ಇದನ್ನು ಕೇವಲ ಬೆಣ್ಣೆಯನ್ನು ಹಾಕಿಕೊಂಡು ತಿನ್ನಲೂ ಚೆನ್ನಾಗಿರುತ್ತದೆ. ಬೇಕಿದ್ದಲ್ಲಿ ಕಾಯಿ/ಕೊತ್ತುಂಬರಿ ಸೊಪ್ಪಿನ ಚಟ್ನಿಯೊಂದಿಗೆ ತಿನ್ನಲು ಕೊಡಿ.

ಸೂಚನೆ: ಎರಡು ಮೀಡಿಯಂ ಲೋಟ ಹಿಟ್ಟಿನಲ್ಲಿ ಸುಮಾರು 10-12 ಉಬ್ಬುರೊಟ್ಟಿಗಳಾಗುತ್ತವೆ.

Advertisements