ನನ್ನ ಬ್ಲಾಗ್ ನ ಓದುಗರಿಗೆಲ್ಲಾ ಸ್ವಾತಂತ್ಯ್ರ ದಿನಾಚರಣೆಯ ಶುಭಾಶಯಗಳು.

ಪ್ರತಿಯೊಬ್ಬರೂ ತಮ್ಮ ದೇಶಪ್ರೇಮವನ್ನು ಒಂದಲ್ಲಾ ಒಂದು ರೀತಿಯಲ್ಲಿ ತೋರಿಸುವುದಿದೆ. ನಮ್ಮ ದೇಶವನ್ನು ಪ್ರತಿನಿಧಿಸುವ ನಮ್ಮ ಬಾವುಟವನ್ನು ಮತ್ತದರ ಬಣ್ಣವನ್ನು ಪ್ರೀತಿಸದವರಾರು? ವರುಷಕ್ಕೊಂದು ದಿನ ಬರುವ ಸ್ವಾತಂತ್ಯ್ರ ದಿನವನ್ನು ಎಲ್ಲರೂ ಸಂಭ್ರಮದಿಂದ ಆಚರಿಸೋಣ. ಅಂದು ಬಾನೆತ್ತರಕೆ ಹಾರಾಡುವ ಬಾವುಟದ ಬಣ್ಣಗಳನ್ನು ಮನದಲ್ಲಿ, ಹೃದಯದಲ್ಲಿ ನೆನೆಯುತ್ತಾ ನಾವು ಅಡಿಗೆಮನೆಯಲ್ಲೂ ಅದೇ ಬಣ್ಣಗಳ ತಿಂಡಿಗಳನ್ನು ಮಾಡುತ್ತಾ (ಯಾವುದೇ ಕೃತಕ ಬಣ್ಣಗಳನ್ನು ಬಳಸದೆ) ನಮ್ಮ ದೇಶಪ್ರೇಮವನ್ನು ತೋರಿಸೋಣ. ಏನಂತೀರ?

ಕೇಸರಿ ಬಣ್ಣಕ್ಕಾಗಿ – ಕ್ಯಾರೆಟ್ ಸಿಹಿ ಇಡ್ಲಿ.

ಬೇಕಾಗುವ ಪದಾರ್ಥಗಳು:

Pic 1

ಕ್ಯಾರೆಟ್ ತುರಿ- 2 ದೊಡ್ಡ ಲೋಟ(ಜ್ಯೂಸ್ ಲೋಟ)

ಪುಡಿ ಮಾಡಿದ ಬೆಲ್ಲ- ಕಾಲು ಲೋಟ

ಹುರಿದ ಉಪ್ಪಿಟ್ಟಿನ(ಮೀಡಿಯಂ) ರವೆ- ಕಾಲು ಲೋಟ

ಉಪ್ಪು-ಚಿಟಕಿ

ಯಾಲಕ್ಕಿ(ಬೇಕೆಂದಲ್ಲಿ)- 4-5

ಮಾಡುವ ವಿಧಾನ:

ಕಾಲು ಕೆ.ಜಿ.ಕ್ಯಾರೆಟ್ ನ್ನು ತೊಳೆದು, ಸಿಪ್ಪೆ ತೆಗೆದು ತುರಿದುಕೊಳ್ಳಿ. ಅದಕ್ಕೆ ದೊಡ್ಡ ಜ್ಯೂಸ್ ಲೋಟದಲ್ಲಿ ಕಾಲು ಲೋಟ ಪುಡಿ ಮಾಡಿದ ಬೆಲ್ಲವನ್ನೂ, ಕಾಲು ಲೋಟ ಹುರಿದ ರವೆಯನ್ನು, ಚಿಟಕಿ ಉಪ್ಪನ್ನು ಬೇಕೆಂದಲ್ಲಿ ಯಾಲಕ್ಕಿ ಪುಡಿಯನ್ನು ಹಾಕಿ ಅರ್ಧ ಗಂಟೆ ಬಿಡಿ. ಬೆಲ್ಲದಿಂದ ಬಿಟ್ಟ ನೀರನ್ನು ರವೆಯು ಹೀರಿಕೊಂಡು ಆ ಮಿಶ್ರಣವು ಹದವಾಗಿರುತ್ತದೆ.

Pic 2

ಕೇಸರಿ ಬಣ್ಣಕ್ಕಾಗಿ ಬೇಕೆಂದಲ್ಲಿ ಸಿಹಿಗುಂಬಳದಿಂದಲೂ (ಚೀನೀಕಾಯಿ) ಕಡಬನ್ನು ತಯಾರಿಸಬಹುದು. (ಸಿಹಿಗುಂಬಳದ ಕಡಬು ರೆಸಿಪಿಗೆ ಇಲ್ಲಿ ಕ್ಲಿಕ್ ಮಾಡಿ).

ಬಿಳಿ ಬಣ್ಣಕ್ಕಾಗಿ – ಉದ್ದಿನ ಇಡ್ಲಿ ಹಿಟ್ಟು. ( ಮೃದುವಾದ ಇಡ್ಲಿಯ ರೆಸಿಪಿಗಾಗಿ ಇಲ್ಲಿ ಕ್ಲಿಕ್ ಮಾಡಿ)

Pic 3

ಹಸಿರು ಬಣ್ಣಕ್ಕಾಗಿ – ಪಾಲಾಕ್ ಖಾರ ಇಡ್ಲಿ.

ಬೇಕಾಗುವ ಪದಾರ್ಥಗಳು:

Pic 4

ಪಾಲಾಕ್ ಸೊಪ್ಪು- 3 ಕಟ್ಟು

ಹಸಿರುಮೆಣಸಿನ ಕಾಯಿ-2

ಹಸಿಶುಂಠಿ- ಅರ್ಧ ಇಂಚು

ಮಾಡುವ ವಿಧಾನ:

ಮೂರು ಕಂತೆ ಪಾಲಾಕ್ ಸೊಪ್ಪನ್ನು ತೊಳೆದು ಅದರ ಜೊತೆಯಲ್ಲಿ ಹಸಿರು ಮೆಣಸಿನ ಕಾಯಿಯನ್ನೂ ಸೇರಿಸಿಕೊಂಡು ಸ್ವಲ್ಪವೇ ನೀರು ಹಾಕಿ ಒಂದು ಪ್ಯಾನ್ ನಲ್ಲಿಟ್ಟು 5-6 ನಿಮಿಷ ಬೇಯಿಸಿಕೊಳ್ಳಿ. ನಂತರ ಅದರ ನೀರೆಲ್ಲಾ ಹೋಗುವಂತೆ ಶೋಧಿಸಿಕೊಳ್ಳಿ. (ಸತ್ವಯುಕ್ತವಾದ ಬೇಯಿಸಿದ ನೀರನ್ನು ಚೆಲ್ಲದೆ ಸಾಂಬಾರು ಮಾಡುವಾಗ ಉಪಯೋಗಿಸಿಕೊಳ್ಳಬಹುದು).

ಶೋಧಿಸಿಕೊಂಡ ಸೊಪ್ಪಿನೊಂದಿಗೆ ಹಸಿಶುಂಠಿಯ ಚೂರುಗಳನ್ನು ಸೇರಿಸಿಕೊಂಡು ಮಿಕ್ಸರ್ ನಲ್ಲಿ ನೀರು ಸೇರಿಸದೆ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಅದನ್ನು ಎರಡು ದೊಡ್ಡ ಲೋಟದಷ್ಟು ಇಡ್ಲಿ ಹಿಟ್ಟಿಗೆ ಮಿಶ್ರ ಮಾಡಿ.

Pic 5

ಈಗ ಕೇಸರಿ-ಬಿಳಿ-ಹಸಿರು ಬಣ್ಣಗಳ ಹಿಟ್ಟು ಸಿದ್ಧವಾಗಿದೆ. (ಯಾವುದೇ ಕೃತಕ ಬಣ್ಣಗಳನ್ನು ಹಾಕುವ ಅವಶ್ಯಕತೆಯಿಲ್ಲ)

ಸ್ಟವ್ ಮೇಲೆ ಕುಕ್ಕರ್ ಇಟ್ಟು, ತಳಕ್ಕೆ ನೀರು ಹಾಕಿ. ಇಡ್ಲಿ ಸ್ಟಾಂಡ್ ನ ಪ್ರತೀ ತಟ್ಟೆಗೂ ಸ್ವಲ್ಪ ಜಿಡ್ಡನ್ನು ಸವರಿ ಮೂರೂ ಬಣ್ಣದ ಹಿಟ್ಟನ್ನು ಬೇರೆ ಬೇರೆಯಾಗಿ ಹಾಕಿ ಕುಕ್ಕರ್ ನಲ್ಲಿಟ್ಟು 10-12 ನಿಮಿಷ ಬೇಯಿಸಿ.

ಮತ್ತೆ ಹತ್ತು ನಿಮಿಷದ ನಂತರ ಕುಕ್ಕರ್ ಮುಚ್ಚಳ ತೆಗೆದಾಗ ಸಿಹಿ-ಸಪ್ಪೆ-ಖಾರದ ಇಡ್ಲಿಗಳು ಕೇಸರಿ-ಬಿಳಿ-ಹಸಿರು ಬಣ್ಣಗಳೊಂದಿಗೆ ಸಿದ್ಧ. ಆ ಬಣ್ಣಗಳನ್ನು ನೋಡುತ್ತಿದ್ದಂತೆ ಅದೇನೋ ಹಾಗೇ ದೇಶ ಪ್ರೇಮ ಉಕ್ಕುವುದು ಸಹಜ. ಮನೆಮಂದಿಗೆಲ್ಲಾ ತ್ರಿವರ್ಣದ ಇಡ್ಲಿಗಳನ್ನು ಕೊಟ್ಟು, ಮಕ್ಕಳಿಗೂ ಆ ಬಣ್ಣಗಳ ಮಹತ್ವವನ್ನು ತಿಳಿಸುತ್ತಾ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆಯನ್ನಾಚರಿಸೋಣ.

                              ಜೈ ಭಾರತಾಂಬೆ.

Pic 6

Advertisements