ಶ್ರೀ ಕೃಷ್ಣನು ಹುಟ್ಟಿದ ದಿನವನ್ನು ಶ್ರೀ ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಆ ದಿನದಂದು ಕೃಷ್ಣನಿಗೆ ಬಹಳ ಪ್ರೀತಿಯೆಂದು ಸಿಹಿ ತಿಂಡಿಗಳು, ಉಂಡೆಗಳು ಅವಲಕ್ಕಿ, ಪಾಯಸ ಮುಂತಾದ ಭಕ್ಷ್ಯಗಳನ್ನು ಮಾಡಿ ನೈವೇದ್ಯ ಮಾಡುವುದಿದೆ.

ಬಹಳ ತಂಪಾದ ಗುಣವನ್ನು ಹೊಂದಿರುವ ಹೆಸರುಬೇಳೆಯಿಂದ ಉಂಡೆಗಳನ್ನು ಮಾಡುವ ವಿಧಾನವನ್ನು ಹೇಳುತ್ತೇನೆ. ಹೊಸದಾಗಿ ತಿಂಡಿಗಳನ್ನು ಮಾಡಲು ಕಲಿಯುತ್ತಿರುವವರು ಸಹ ಪಾಕದ ಹದವು ತಪ್ಪುವುದೇನೋ ಎಂಬ ಭಯವಿಲ್ಲದೆ ಇಂತಹಾ ಉಂಡೆಗಳನ್ನು ಬಹಳ ಸುಲಭವಾಗಿ ಮಾಡಬಹುದು.
(ರವೆ ಉಂಡೆ ರೆಸಿಪಿಗೆ ಇಲ್ಲಿ ಕ್ಲಿಕ್ ಮಾಡಿ)

ಬೇಕಾಗುವ ಪದಾರ್ಥಗಳು:

ಹೆಸರುಬೇಳೆ- ಅರ್ಧ ಕೆ.ಜಿ.

ಸಕ್ಕರೆ- ಮುಕ್ಕಾಲು ಬಟ್ಟಲು

ತುಪ್ಪ- ಕಾಲು ಬಟ್ಟಲಿಗೂ                           ಸ್ವಲ್ಪ ಕಡಿಮೆ

ಕೊಬ್ಬರಿ ತುರಿ- 1 ಹಿಡಿ

ಗೋಡಂಬಿ- ಸ್ವಲ್ಪ

ಮಾಡುವ ವಿಧಾನ:

ಸ್ಟವ್ ಮೇಲೆ ದಪ್ಪ ತಳದ ಫ್ರೈಯಿಂಗ್ ಪ್ಯಾನ್ ಇಟ್ಟು ಅರ್ಧ ಕೆ.ಜಿ. ಹೆಸರುಬೇಳೆಯನ್ನು ಹಾಕಿ, ಎಣ್ಣೆ/ತುಪ್ಪ ಏನೂ ಹಾಕದೆ ಹುರಿದುಕೊಳ್ಳಿ.          ಹೆಸರುಬೇಳೆಯು ಘಂ ಎಂದು ಪರಿಮಳ ಬಂದು ಅದು ಚೆನ್ನಾಗಿ ಕೆಂಪಗಾಗುವವರೆಗೆ ಹುರಿಯಿರಿ. ಮೊದಲು ಸ್ವಲ್ಪ ಹೊತ್ತು ದೊಡ್ಡ ಉರಿ ಇದ್ದು, ನಂತರ ಸಣ್ಣ ಮಾಡಿ.

Pic 1

ಹುರಿದ ನಂತರ, ಅದು ಪೂರ್ತಿ ತಣ್ಣಗಾದಾಗ ಮಿಕ್ಸರ್ ಡ್ರೈ ಜಾರ್ ಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಮತ್ತೆ ಮತ್ತೆ (ಒಟ್ಟು 3 ಬಾರಿ) ಮಿಕ್ಸರ್ ಗೆ ಹಾಕಿ ನುಣ್ಣಗಾದ ಪುಡಿಯನ್ನು ತಯಾರಿಸಿಕೊಳ್ಳಿ. ಅದನ್ನು ಒಂದು ಬಟ್ಟಲಿನಲ್ಲಿ ಅಳೆದಿಟ್ಟುಕೊಳ್ಳಿ. (ಒಂದು ಕೆ.ಜಿ.ಗೂ ಜಾಸ್ತಿ ಪ್ರಮಾಣದಲ್ಲಿ ಮಾಡುವವರು ಬೇಳೆಯನ್ನು ಮಿಲ್ ಗೆ ಕೊಟ್ಟು ಪುಡಿ ಮಾಡಿಸಬಹುದು)

Pic 2

ಈಗ ಅದೇ ಬಟ್ಟಲಿನ ಮುಕ್ಕಾಲು ಭಾಗದಷ್ಟು ಸಕ್ಕರೆ ಪುಡಿಯನ್ನು ತಯಾರಿಸಿಕೊಳ್ಳಿ.

Pic 3

ಅದೇ ಬಟ್ಟಲಿನ ಕಾಲು ಭಾಗಕ್ಕಿಂತ ಸ್ವಲ್ಪ ಕಡಿಮೆ ತುಪ್ಪವನ್ನು ಕರಗಿಸಿಟ್ಟುಕೊಳ್ಳಿ.

ಕೊಬ್ಬರಿಯ ಮೇಲಿನ ಕಪ್ಪು ಸಿಪ್ಪೆ ತೆಗೆದು ತುರಿದಿಟ್ಟುಕೊಳ್ಳಿ, ಗೋಡಂಬಿಯನ್ನು ಸಣ್ಣ ಚೂರುಗಳನ್ನಾಗಿ ಮಾಡಿಕೊಳ್ಳಿ.

Pic4

ಈಗ ಸ್ಟವ್ ಹೊತ್ತಿಸಿ, ಫ್ರೈಯಿಂಗ್ ಪ್ಯಾನ್ ಇಟ್ಟು ತುಪ್ಪ ಹಾಕಿ, ಅದು ಚೆನ್ನಾಗಿ ಕಾದಾಗ ಗೋಡಂಬಿ ಚೂರುಗಳನ್ನು ಹಾಕಿ ಹುರಿದು ಸ್ಟವ್ ಆರಿಸಿಬಿಡಿ. ನಂತರ ಫ್ರೈಯಿಂಗ್ ಪ್ಯಾನ್ ಗೆ ಅಳೆದಿಟ್ಟ 1 ಬಟ್ಟಲು ಹೆಸರು ಹಿಟ್ಟು ಹಾಕಿ ಕೈ ಮಗುಚಿ.

Pic5

ಹಾಗೇ ಸಕ್ಕರೆ ಪುಡಿಯನ್ನೂ, ಕೊಬ್ಬರಿ ತುರಿಯನ್ನು ಹಾಕಿ ಸಟ್ಟುಗದಲ್ಲಿ (ಸ್ಪಾಚುಲಾ) ಚೆನ್ನಾಗಿ ಕೈ ಮಗುಚಿಡಿ.

Pic 6

ಇನ್ನು ಎಷ್ಟು ಹೊತ್ತಿಗಾದರೂ (ಇಷ್ಟರವರೆಗೆ ಬೆಳಿಗ್ಗೆ ಮಾಡಿಟ್ಟು, ಇನ್ನು ರಾತ್ರಿ ಬೇಕಾದರೂ) ಕೈಯಿಂದ ಒಮ್ಮೆ ಎಲ್ಲಾ ಪದಾರ್ಥಗಳನ್ನೂ ಮಿಕ್ಸ್ ಮಾಡಿ ನಿಮಗೆ ಬೇಕಾದ ಗಾತ್ರಕ್ಕೆ ಉಂಡೆ ಮಾಡಿ. ಹೆಸರು ಹಿಟ್ಟಿನ ಉಂಡೆ ಸಿದ್ಧ.

(ಗೋಧಿ ಹಿಟ್ಟಿನ ಉಂಡೆಗೆ ಇಲ್ಲಿ ಕ್ಲಿಕ್ ಮಾಡಿ).

ಶ್ರೀ ಕೃಷ್ಣನಿಗೆ ನೈವೇದ್ಯಕ್ಕೆ ಅರ್ಪಿಸಿ ನಂತರ ನೀವೂ ಸ್ವೀಕರಿಸಿ.
ಸೂಚನೆ:

ಹೆಸರು ಹಿಟ್ಟನ್ನು ಮುಂಚಿತವಾಗಿ ಸಿದ್ಧ ಮಾಡಿಟ್ಟುಕೊಂಡಿದ್ದರಂತೂ ಈ ಉಂಡೆಯನ್ನು ಬಲು ಬೇಗ ಮಾಡಬಹುದು.

Advertisements