ಮಹಾರಾಷ್ಟ್ರದ ಅತ್ಯಂತ ಜನಪ್ರಿಯವಾದ, ಅಲ್ಲಿ ಬಹಳ ಪ್ರಸಿದ್ಧಿ ಪಡೆದಿರುವ ತಿನಿಸು ಈ ಪಾವ್ ಭಾಜಿ. ಬ್ರೆಡ್, ಬನ್ಸ್ ರೂಪದ ಪಾವ್ ಹಾಗೂ ಪಲ್ಯದ ರೂಪದ ಭಾಜಿ ಈ ಎರಡೂ ಸೇರಿ ಪಾವ್ ಭಾಜಿ. ನಮ್ಮಲ್ಲಿ ಎಲ್ಲಾ ರೆಸ್ಟೋರೆಂಟ್ ಗಳಲ್ಲೂ ಇದು ಸಿಗುತ್ತದಾದರೂ ನಾವೇ ಮನೆಯಲ್ಲಿ ಇದನ್ನು ತಯಾರಿಸಿಕೊಂಡು ಇದನ್ನು ಸವಿಯುವ ಮಜವೇ ಬೇರೆ. ಬೆಳಗಿನ ಉಪಹಾರಕ್ಕೋ, ಸಂಜೆ ತಿನ್ನಲೋ, ಇಲ್ಲಾ ಡಿನ್ನರ್ ಗೋ, ಪಾರ್ಟಿಗೋ ಯಾವುದಕ್ಕಾದರೂ ಸೂಕ್ತವಿದು. ಪಾವ್ ಭಾಜಿ ಮಾಡಲು ಬೇಕಾಗಿರುವ ಪಾವ್ ಭಾಜಿ ಮಸಾಲ ಪೌಡರ್ ನ್ನು ಸಹ ನಾವೇ ತಯಾರಿಸಿಕೊಳ್ಳಬಹುದು. ಇನ್ನೇಕೆ ತಡ? ಬನ್ನಿ ನೋಡೋಣ ಇದನ್ನು ಮಾಡುವ ಬಗೆಯನ್ನು.

ಪಾವ್ ಭಾಜಿ ಮಸಾಲ ಪೌಡರ್ ಗೆ ಬೇಕಾಗುವ ಪದಾರ್ಥಗಳು:

Pavbhaji masala pudi

ದನಿಯ(ಕೊತ್ತುಂಬರಿ ಬೀಜ) -4 ಚಮಚ

ಜೀರಿಗೆ – 3 ಚಮಚ

ಕಾಳು ಮೆಣಸು(ಪೆಪ್ಪರ್)- 2 ಚಮಚ

ಸೋಂಪು ಕಾಳು- 2 ಚಮಚ

ಯಾಲಕ್ಕಿ- 2

ಲವಂಗ- 10-12

1 ಇಂಚಿನ ದಾಲ್ಚಿನ್ನಿ- 4-5

ಪಲಾವ್ ಎಲೆ- 2

ಕರಿಬೇವಿನ ಎಲೆ- 6-8’

ಬ್ಯಾಡಗಿ ಮೆಣಸಿನ ಕಾಯಿ- 16-18

ಮೇಲಿನ ಎಲ್ಲಾ ಪದಾರ್ಥಗಳನ್ನು ಒಂದು ದಪ್ಪ ತಳದ ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಅವುಗಳು ಗರಿಗರಿಯಾದಾಗ ಹಾಗೇ ಪದಾರ್ಥಗಳ ಪರಿಮಳ ಬಂದಾಗ ಸ್ಟವ್ ನ್ನು ಆರಿಸಿ ಬೇರೊಂದು ಪಾತ್ರೆಗೆ ಹಾಕಿ. ಪೂರ್ತಿ ತಣಿದ ನಂತರ ಮಿಕ್ಸರ್ ಜಾರ್ ಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ.

ಹೀಗೆ ಮಾಡಿಟ್ಟುಕೊಂಡ ಪಾವ್ ಭಾಜಿ ಮಸಾಲ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ತೆಗೆದಿಟ್ಟರೆ ಅನೇಕ ತಿಂಗಳುಗಳವರೆಗೂ ಹಾಳಾಗದೆ ಇರುತ್ತದೆ.

ಜಾಸ್ತಿ ಪ್ರಮಾಣದಲ್ಲಿ ಪುಡಿಯನ್ನು ಮಾಡುವುದಾದರೆ ಒಂದಾದ ನಂತರ ಒಂದರಂತೆ ಪದಾರ್ಥಗಳನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ.

ಈಗ ಪಾವ್ ಭಾಜಿಯನ್ನು ಹೇಗೆ ಮಾಡುವುದೆಂದು ನೋಡೋಣ.

ಭಾಜಿಗೆ ಬೇಕಾಗುವ ಪದಾರ್ಥಗಳು:

Pav bhaji mainvegs

ಹೆಚ್ಚಿದ ಎಲೆಕೋಸು(ಕ್ಯಾಬೇಜ್)- 1 ಬಟ್ಟಲು

ಕ್ಯಾರೆಟ್- 2

ಬೀನ್ಸ್- 10-12

ಆಲೂಗೆಡ್ಡೆ- 2

ಒಗ್ಗರಣೆಗೆ:
IMG_6993

ಎಣ್ಣೆ- 2-3 ಚಮಚ

ದೊಡ್ಡ ಮೆಣಸಿನ ಕಾಯಿ- 1 ದೊಡ್ಡದು

ನೀರುಳ್ಳಿ- 2

ಟೊಮೊಟೊ-2-3

ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಮಾಡಿರುವುದು- 2 ಚಮಚ

ಪಾವ್ ಭಾಜಿ ಮಸಾಲ ಪುಡಿ- 3 ಚಮಚ

ವಾಂಗಿಬಾತ್ ಪುಡಿ- 2 ಚಮಚ

ಅರಿಶಿನ- ಕಾಲು ಚಮಚ

ಹೆಚ್ಚಿದ ಕೊತ್ತುಂಬರಿ ಸೊಪ್ಪು- 4-5 ಚಮಚ

ಬೆಣ್ಣೆ- 2 ಚಮಚ

ಉಪ್ಪು- ರುಚಿಗೆ ತಕ್ಕಷ್ಟು

Pavbhaji 2powder turmeric

 

ಸರ್ವಿಂಗ್ ಪ್ಲೇಟ್ ಗೆ ಹಾಕಲು:

Pavbhaji plate garnish

ಕೊತ್ತುಂಬರಿ ಸೊಪ್ಪು- ಅರ್ಧ ಕಟ್ಟು

ಬೆಣ್ಣೆ- 1 ನಿಂಬೆ ಗಾತ್ರ

ಹೆಚ್ಚಿದ ಈರುಳ್ಳಿ- 1-2 (ಬೇಕಿದ್ದಲ್ಲಿ)

ನಿಂಬೆ ಹಣ್ಣು- 1

ಮಾಡುವ ವಿಧಾನ:

ಮೊದಲು ಕ್ಯಾಬೇಜ್ ನ್ನು ದೊಡ್ಡದಾಗಿ ಕತ್ತರಿಸಿ, ತೊಳೆದುಕೊಳ್ಳಿ. ಈಗ ತೊಳೆದ ಬೀನ್ಸ್ ಮತ್ತು ಕ್ಯಾರೆಟ್ ನ್ನು ದೊಡ್ಡದಾಗಿ ಕತ್ತರಿಸಿಕೊಳ್ಳಿ. ಆಲೂಗೆಡ್ಡೆಯನ್ನು ತೊಳೆದು, ಅದನ್ನು ಬೇರೆ ಪಾತ್ರೆಯಲ್ಲಿಡಿ.

ಈಗ ಈ ನಾಲ್ಕು ಬಗೆಯ ತರಕಾರಿಗಳನ್ನು ಅರ್ಧ ಲೋಟ ನೀರಿನೊಂದಿಗೆ ಒಂದು ಬಟ್ಟಲಿಗೆ ಹಾಕಿ, ಕುಕ್ಕರ್ ನಲ್ಲಿಟ್ಟು, 3 ವಿಷಲ್ ಆದಾಗ ಸ್ಟವ್ ಆರಿಸಿ.

10 ನಿಮಿಷಗಳ ನಂತರ ತರಕಾರಿಗಳಲ್ಲಿನ ನೀರು ಹೋಗುವಂತೆ ಜಾಲರಿಯಲ್ಲಿ ಶೋಧಿಸಿಕೊಳ್ಳಿ. (ಅದರ ನೀರು ಚೆಲ್ಲಬೇಡಿ).ಬೆಂದ ತರಕಾರಿಗಳೆಲ್ಲ ತಣ್ಣಗಾದಾಗ ಅದನ್ನು ಮಿಕ್ಸರ್ ಜಾರ್ ಗೆ ಹಾಕಿ ಒಂದೇ ಒಂದು ಸುತ್ತು ಬೀಟ್ ಮಾಡಿಕೊಳ್ಳಿ. ಹಾಗೇ ಆಲೂಗೆಡ್ಡೆಯ ಸಿಪ್ಪೆ ತೆಗೆದು ಕೈಯಲ್ಲಿ ನುರಿದುಕೊಳ್ಳಿ.

IMG_6989

Pavbhaji 2 veg baked

ಈಗ ಒಗ್ಗರಣೆಗಾಗಿ, ಈರುಳ್ಳಿ, ಟೊಮೊಟೊ ಹಾಗೂ ಕ್ಯಾಪ್ಸಿಕಂ ಗಳನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಬೆಳ್ಳುಳ್ಳಿ ಮತ್ತು ಹಸಿಶುಂಠಿಯನ್ನು ಜಜ್ಜಿ ಪೇಸ್ಟ್ ತಯಾರಿಸಿಕೊಳ್ಳಿ.

ಮತ್ತೆ ಸ್ಟವ್ ಹೊತ್ತಿಸಿ, ಫ್ರೈಯಿಂಗ್ ಪ್ಯಾನ್ ಇಟ್ಟು ಎಣ್ಣೆ ಹಾಕಿ. ಕಾದಾಗ ಹೆಚ್ಚಿಟ್ಟ, ಈರುಳ್ಳಿ, ಕ್ಯಾಪ್ಸಿಕಂ, ನಂತರ ಟೊಮೊಟೊ ಹಾಕಿ ಸ್ವಲ್ಪ ಹುರಿಯಿರಿ. ಈಗ ಬೆಳ್ಳುಳ್ಳಿ- ಶುಂಠಿ ಪೇಸ್ಟ್, ಅರಿಶಿನ ಹಾಕಿ ಹುರಿಯಿರಿ. ಟೊಮೊಟೊ ಮೆತ್ತಗಾಗಿ, ಈರುಳ್ಳಿಯು ಹೊಂಬಣ್ಣ ಬಂದಾಗ, ಮೊದಲೆ ಸಿದ್ಧ ಮಾಡಿಟ್ಟ ತರಕಾರಿಗಳನ್ನು, ನುರಿದಿಟ್ಟ ಆಲೂವನ್ನು ಹಾಕಿ ಕೈ ಮಗುಚಿ.

Pavbhaji Oggarne start

Pavbhaji oggrne final

ನಂತರ ಪಾವ್ ಭಾಜಿ ಮಸಾಲ ಪುಡಿ, ವಾಂಗಿಬಾತ್ ಪುಡಿ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. ಬೆಂದ ತರಕಾರಿಗಳನ್ನು ಶೋಧಿಸುವಾಗ ತೆಗೆದಿಟ್ಟ ನೀರನ್ನು ಅರ್ಧ ಮುಕ್ಕಾಲು ಲೋಟದಷ್ಟು ಹಾಕಿ. ಎಲ್ಲವೂ ಚೆನ್ನಾಗಿ ಮಿಶ್ರವಾದಾಗ ಕೊನೆಯಲ್ಲಿ 2-3 ಚಮಚದಷ್ಟು ಹೆಚ್ಚಿದ ಕೊತ್ತುಂಬರಿ ಸೊಪ್ಪು ಹಾಗೂ 2 ಚಮಚದಷ್ಟು ಬೆಣ್ಣೆಯನ್ನು ಹಾಕಿ ಸ್ಟವ್ ಆರಿಸಿ ಪ್ಯಾನ್ ಗೆ ಮುಚ್ಚಳ ಮುಚ್ಚಿ. ಸ್ವಾದಿಷ್ಟ, ಆರೋಗ್ಯಕರ ಭಾಜಿ ರೆಡಿ.

ಸರ್ವ್ ಮಾಡುವ ಸಮಯದಲ್ಲಿ, ತಂದಿಟ್ಟುಕೊಂಡ ಪಾವ್ ನ್ನು ಮಧ್ಯ ಭಾಗದಲ್ಲಿ ಕತ್ತರಿಸಿ ಅದಕ್ಕೆ ಸ್ವಲ್ಪ ಬೆಣ್ಣೆಯನ್ನು ಸವರಿ.

Pav bhaji pav cut butter

ಪುನ: ಸ್ಟವ್ ಹೊತ್ತಿಸಿ ಕಾವಲಿಯನ್ನಿಟ್ಟು, ಬೆಣ್ಣೆ ಸವರಿದ ಭಾಗವು ಕಾವಲಿಗೆ ತಾಗುವಂತೆ ಪಾವ್ ನ್ನು ಇಡಿ. ಪಾವ್ ನ ಮೆಲ್ಭಾಗಕ್ಕೂ ಸ್ವಲ್ಪವೇ ಬೆಣ್ಣೆಯನ್ನು ಸವರಿ ಆ ಬದಿಯೂ ಸ್ವಲ್ಪ ಬಿಸಿ ಮಾಡಿ.

Pav bhaji tawa pavs

ಈಗ ಸರ್ವಿಂಗ್ ಪ್ಲೇಟ್ ಗೆ ಬಿಸಿ ಮಾಡಿದ ಪಾವ್ ಗಳನ್ನಿಟ್ಟು ಒಂದು ಬೌಲ್ ಗೆ ಭಾಜಿಯನ್ನು ಹಾಕಿ ಅದರ ಮೇಲೆ (ಬೇಕಿದ್ದಲ್ಲಿ ಸಣ್ಣಗೆ ಹೆಚ್ಚಿದ ಈರುಳ್ಳಿ,) ಹೆಚ್ಚಿಟ್ಟ ಕೊತ್ತುಂಬರಿ ಸೊಪ್ಪು, ಸ್ವಲ್ಪ ಬೆಣ್ಣೆ, ನಿಂಬೆರಸ, ಹಾಕಿ ಸರ್ವ್ ಮಾಡಿ. ಈ ರುಚಿಕರವಾದ ತಿನಿಸನ್ನು ಮನೆಯಲ್ಲಿಯೇ ಮಾಡಿ ಮನೆಮಂದಿಗೆಲ್ಲಾ ಕೊಟ್ಟು ಅವರ ಪ್ರಶಂಸೆಯನ್ನು ಕೇಳಲು ಸಿದ್ಧರಾಗಿ😄.