ಚೀನೀಕಾಯಿಯಿಂದ (ಸಿಹಿಗುಂಬಳ) ಮಾಡಬಹುದಾದ ಕಡಬು ಹಾಗೂ ಸಿಹಿ ಪೂರಿಯನ್ನು ಈ ಹಿಂದೆಯೇ ಪೋಸ್ಟ್ ಮಾಡಿದ್ದೇನೆ. ಚೀನೀಕಾಯಿಯ ಆರೋಗ್ಯ ಲಾಭಗಳನ್ನು “ಚೀನೀಕಾಯಿ ಕಡಬು” ಈ ಪೋಸ್ಟ್ ನಲ್ಲಿ ತಿಳಿಸಲಾಗಿದೆ. ಚೀನೀಕಾಯಿಗೆ ಗೋಧಿಹಿಟ್ಟು, ರವೆಯನ್ನು ಹಾಗೂ ಇನ್ನಿತರ ಕೆಲ ಮಸಾಲ ಪದಾರ್ಥಗಳನ್ನು ಸೇರಿಸಿ ಮಾಡುವ ಈ ಪೂರಿಯು ಬೆಳಗಿನ ಉಪಹಾರಕ್ಕೋ ಇಲ್ಲಾ ಸಂಜೆಯ ಕಾಫಿ/ಟೀ ಜೊತೆಯಲ್ಲೋ, ತಿನ್ನಲು ಅಥವಾ ಲಂಚ್ ಬಾಕ್ಸ್ ಗೆ ಹಾಕಿ ತೆಗೆದುಕೊಂಡು ಹೋಗಲು ಬಹಳ ಚೆನ್ನಾಗಿರುತ್ತದೆ. ಸ್ವಲ್ಪವೂ ಎಣ್ಣೆಯನ್ನು ಹೀರಿಕೊಳ್ಳದ ಈ ಖಾರದ ಪೂರಿಯು ಬಹಳ ಮೃದುವಾಗಿದ್ದು ಸ್ವಾದಿಷ್ಟವಾಗಿರುತ್ತದೆ. ಹೇಗೆ ಮಾಡುವುದೆಂದು ನೋಡೋಣ ಬನ್ನಿ.

(ಚೀನೀಕಾಯಿ ಸಿಹಿ ಪೂರಿ- ಇದರ ರೆಸಿಪಿಗೆ ಇಲ್ಲಿ ಕ್ಲಿಕ್ ಮಾಡಿ)

ಬೇಕಾಗುವ ಪದಾರ್ಥಗಳು:

Cheeni puri ingredients

ಚೀನೀಕಾಯಿ- ಕಾಲು ಕೆ.ಜಿ.

ಗೋಧಿಹಿಟ್ಟು- ಒಂದೂ ಮುಕ್ಕಾಲು(ದೊಡ್ಡ) ಲೋಟ/(ಕಾಲು ಕೆ.ಜಿ.)

ಚಿರೋಟಿ ರವೆ- ಕಾಲು ಲೋಟ

ಅಚ್ ಖಾರದ ಪುಡಿ- ಅರ್ಧ ಚಮಚ

ಅರಿಶಿನ- ಕಾಲು ಚಮಚ

ದನಿಯ-ಜೀರಿಗೆ-ಅರ್ಧ ಚಮಚ

ಓಮದ ಕಾಳು- ಅರ್ಧ ಚಮಚ

ಹಸಿಮೆಣಸಿನ ಕಾಯಿ- 1-2

ಹೆಚ್ಚಿದ ಕೊತ್ತುಂಬರಿಸೊಪ್ಪು-ಅರ್ಧ ಹಿಡಿಯಷ್ಟು

ಎಣ್ಣೆ- 2 ಚಮಚ

ಉಪ್ಪು- ರುಚಿಗೆ ತಕ್ಕಷ್ಟು

ಎಣ್ಣೆ- ಕರಿಯಲು

ಮಾಡುವ ವಿಧಾನ:

ಮೊದಲು ಚೀನೀಕಾಯಿಯ ಸಿಪ್ಪೆ ಮತ್ತು ಬೀಜ ತೆಗೆದು ತುರಿದುಕೊಳ್ಳಿ. ಹಸಿಮೆಣಸಿನ ಕಾಯಿಯನ್ನು ಜಜ್ಜಿಟ್ಟುಕೊಳ್ಳಿ ಹಾಗೇ ಕೊತ್ತುಂಬರಿಸೊಪ್ಪನ್ನು ಹೆಚ್ಚಿಕೊಳ್ಳಿ.

Cheeni puri kayi turi

ಒಂದು ಬೇಸಿನ್ ಗೆ ಮೇಲೆ ತಿಳಿಸಿದ ಪ್ರಮಾಣದ ಗೋಧಿಹಿಟ್ಟನ್ನು ಹಾಕಿ, ಅದಕ್ಕೆ ತುರಿದ ಚೀನೀಕಾಯಿಯನ್ನು, ಚಿರೋಟಿ ರವೆಯನ್ನು (ಹುರಿಯುವ ಅಗತ್ಯವಿಲ್ಲ), ರೆಡ್ ಚಿಲ್ಲಿ ಪೌಡರ್, ದನಿಯ-ಜೀರಿಗೆ ಪುಡಿ, ಓಮದ ಕಾಳು, ಅರಿಶಿನ, ಉಪ್ಪು, 2 ಚಮಚ ಹಸಿ ಎಣ್ಣೆ, ಜಜ್ಜಿಟ್ಟ ಹಸಿಮೆಣಸಿನ ಕಾಯಿ, ಕೊತ್ತುಂಬರಿ ಸೊಪ್ಪು –ಇಷ್ಟನ್ನೂ ಹಾಕಿ, ಕಾಲು ಲೋಟಕ್ಕೂ ಸ್ವಲ್ಪ ಕಡಿಮೆ ನೀರನ್ನು ಸ್ವಲ್ಪ ಸ್ವಲ್ಪವೇ ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ. ಕೊನೆಯದಾಗಿ ಅಂಗೈಗೆ ಸ್ವಲ್ಪ ಎಣ್ಣೆಯನ್ನು ಮುಟ್ಟಿಕೊಂಡು ಹಿಟ್ಟನ್ನು ಕಲಸಿ, ಮುಚ್ಚಿಡಿ.

Cheeni Puri batter all mix

ಇನ್ನು 15-20 ನಿಮಿಷಗಳ ನಂತರವೇ ಅದನ್ನು ಉಪಯೋಗಿಸುವುದು.

Cheeni puri batter final

15-20 ನಿಮಿಷಗಳ ನಂತರ, ಸ್ಟವ್ ಹೊತ್ತಿಸಿ ಫ್ರೈಯಿಂಗ್ ಪ್ಯಾನ್ ಗೆ ಎಣ್ಣೆ ಹಾಕಿ ಕಾಯಲು ಇಡಿ. ಇನ್ನೊಮ್ಮೆ ಕೈಗೆ ಎಣ್ಣೆ ಸವರಿಕೊಂಡು ಕಲಸಿಟ್ಟ ಹಿಟ್ಟನ್ನು ಇನ್ನೊಮ್ಮೆ ಕಲಸಿಕೊಂಡು, ನಿಂಬೆಗಾತ್ರದಷ್ಟು ದೊಡ್ಡದಾದ ಉಂಡೆಗಳನ್ನು ಮಾಡಿಕೊಳ್ಳಿ.

Cheeni puri batter unde flat

ಈಗ ಚಪಾತಿ ಮಣೆಗೂ, ಲಟ್ಟಣಿಗೆಗೂ ಒಮ್ಮೆ ಎಣ್ಣೆ ಸವರಿಕೊಂಡು ಮಾಡಿಟ್ಟ ಉಂಡೆಯನ್ನಿಟ್ಟು ಸ್ವಲ್ಪ ದಪ್ಪಕ್ಕೆ ಲಟ್ಟಿಸಿಕೊಳ್ಳಿ. ಅಥವಾ ಪ್ಲಾಸ್ಟಿಕ್ ಹಾಳೆಯ ಮೇಲೆ ಉಂಡೆಯನ್ನಿಟ್ಟು ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು ಕೈಯಲ್ಲಿಯೇ ಲಟ್ಟಿಸಿಕೊಳ್ಳಿ.

ಫ್ರೈಯಿಂಗ್ ಪ್ಯಾನ್ ನಲ್ಲಿಟ್ಟ ಎಣ್ಣೆಯು ಚೆನ್ನಾಗಿ ಕಾದಾಗ ಲಟ್ಟಿಸಿದ ಹಾಳೆಯನ್ನು ಅದಕ್ಕೆ ಬಿಟ್ಟು ಅದು ಉಬ್ಬುವಂತೆ ಅದನ್ನು ಸಟ್ಟುಗದಿಂದ ಒತ್ತುತ್ತಾ ಬನ್ನಿ. ಎರಡೂ ಬದಿಗೆ ಬೇಯುವಂತೆ ತಿರುಗಿಸಿ ಹಾಕಿ. ಇದು ಹೊಂಬಣ್ಣ ಬಂದಾಗ ಈಚೆ ತೆಗೆಯಿರಿ.

ಸ್ವಾದಿಷ್ಟವಾದ, ಮೃದುವಾದ ಚೀನೀಕಾಯಿ ಖಾರ ಪೂರಿ ಸವಿಯಲು ಸಿದ್ಧ. ನಿಮ್ಮಿಷ್ಟದ ಚಟ್ನಿಯೊಂದಿಗೆ ಸರ್ವ್ ಮಾಡಿ.

ಸೂಚನೆ:

1.ಮೇಲೆ ತಿಳಿಸಿದ ಪ್ರಮಾಣದಲ್ಲಿ ಪದಾರ್ಥಗಳನ್ನು ತೆಗೆದುಕೊಂಡರೆ ಸುಮಾರು14-15 ಪೂರಿಗಳನ್ನು ಮಾಡಬಹುದು.

2.ನಾನಿಲ್ಲಿ ಮದ್ಯಮ ಖಾರದ ರುಚಿಯನ್ನು ತಿಳಿಸೆದ್ದೇನೆ. ಖಾರ ಪ್ರಿಯರು ರೆಡ್ ಚಿಲ್ಲಿ ಪೌಡರ್ ಹಾಗೂ ಹಸಿಮೆಣಸಿನ ಕಾಯಿಯ ಪ್ರಮಾಣವನ್ನು ಬೇಕೆಂದರೆ ಜಾಸ್ತಿ ಮಾಡಿಕೊಳ್ಳಬಹುದು.