ಸಾಮಾನ್ಯವಾಗಿ ತೊಗರಿಬೇಳೆಯನ್ನು ಉಪಯೋಗಿಸಿ ಮಾಡುವ ರಸಂ ಎಲ್ಲರಿಗೂ ತಿಳಿದಿರುತ್ತದೆ. ಬೇಳೆಯನ್ನು ಉಪಯೋಗಿಸದೆ ದಿಢೀರ್ ಎಂದು ಮಾಡುವ ಈ ಟೊಮೊಟೊ ಹಣ್ಣಿನ ರಸಂ ಮಾಡಲೂ ಸುಲಭ, ಸವಿಯಲೂ ರುಚಿಕರ. ಮಳೆ-ಛಳಿಗಾಲದಲ್ಲಿ ಮದ್ಯಾಹ್ನದ ಅಥವಾ ರಾತ್ರಿಯ ಊಟಕ್ಕೆ ಇಂತಹಾ ರಸಂ ಇದ್ದರೆ ಜೊತೆಯಲ್ಲಿ ಗರಿಗರಿ ಹಪ್ಪಳವಿದ್ದರೆ ಆಹಾ! ಬನ್ನಿ ನೋಡೋಣ ಇದನ್ನು ಮಾಡುವ ವಿಧಾನವನ್ನು.

(ಟೊಮೊಟೊ ಸೂಪ್ ರೆಸಿಪಿಗೆ ಇಲ್ಲಿ ಕ್ಲಿಕ್ ಮಾಡಿ)

ಬೇಕಾಗುವ ಪದಾರ್ಥಗಳು:

ಟೊಮೊಟೊ ಹಣ್ಣು- 1-2

ತೆಂಗಿನ ತುರಿ- ಒಂದು ಹೋಳು

ರಸಂ ಪುಡಿ- 2 ಚಮಚ

ಬೆಲ್ಲ- 2 ಅಡಿಕೆ ಗಾತ್ರ

ಉಪ್ಪು- ರುಚಿಗೆ ತಕ್ಕಷ್ಟು

ಅರಿಶಿನ- ಕಾಲು ಚಮಚ

ಕರಿಬೇವಿನ ಎಲೆಗಳು- 8-10

ಕೊತ್ತುಂಬರಿ ಸೊಪ್ಪು- ಸ್ವಲ್ಪ

ಒಗ್ಗರಣೆಗೆ:

ತುಪ್ಪ- 1 ಚಮಚ

ಜೀರಿಗೆ- ಕಾಲು ಚಮಚ

ಸಾಸಿವೆ- ಕಾಲು ಚಮಚ

ಇಂಗು- 2 ಚಿಟಕಿ(ಬೇಕಿದ್ದಲ್ಲಿ)

ಮಾಡುವ ವಿಧಾನ:

ರಸಂ ಮಾಡುವ ಮುನ್ನ ರಸಂ ಪೌಡರ್ ನ್ನು ಮಾಡಬಹುದಾದ ವಿಧಾನವನ್ನು ನೋಡೋಣ.

6-8 ಬ್ಯಾಡಗಿ ಮೆಣಸಿನ ಕಾಯಿ, 2 ಚಮಚ ದನಿಯ (ಕೊತ್ತುಂಬರಿ ಬೀಜ), ಅರ್ಧ ಚಮಚ ಜೀರಿಗೆ, ಅರ್ಧ ಚಮಚ ಮೆಂತ್ಯೆ, ಕಾಲು ಚಮಚ ಸಾಸಿವೆ ಇಷ್ಟನ್ನೂ ಬೇರೆ ಬೇರೆಯಾಗಿ ಹುರಿದುಕೊಳ್ಳಿ. ಬ್ಯಾಡಗಿ ಮೆಣಸಿನ ಕಾಯಿಯು ಗರಿಗರಿಯಾಗುವವರೆಗೆ ಹಾಗೂ ದನಿಯವನ್ನು ಬೆರಳುಗಳಿಂದ ಒತ್ತಿದರೆ ಪುಡಿಯಾಗುವವರೆಗೆ ಸಣ್ಣ ಉರಿಯಲ್ಲಿ ಹುರಿಯಬೇಕಾಗುತ್ತದೆ.

ಎಲ್ಲಾ ಪದಾರ್ಥಗಳು ತಣಿದ ನಂತರ ಇದನ್ನು ಮಿಕ್ಸರ್ ಜಾರ್ ಗೆ ಹಾಕಿ ಪುಡಿಮಾಡಿಕೊಂಡರೆ ರಸಂ ಪೌಡರ್ ಸಿದ್ಧವಾದಂತೆ. ಇದೇ ಅಳತೆಯಲ್ಲಿ ಜಾಸ್ತಿ ಪ್ರಮಾಣದಲ್ಲಿ ಮೊದಲೇ ರಸಂ ಪುಡಿಯನ್ನು ತಯಾರಿಸಿಟ್ಟುಕೊಂಡಲ್ಲಿ ರಸಂ ನ್ನು ದಿಢೀರ್ ಎಂದು ಮಾಡಲು ಸುಲಭ. ಜಾಸ್ತಿ ಪ್ರಮಾಣದಲ್ಲಿ ಮಾಡಿಟ್ಟುಕೊಂಡ ರಸಂ ಪುಡಿಯನ್ನು ಗಾಳಿಯಾಡದ ಡಬ್ಬಿಯಲ್ಲಿ ಹಾಕಿ ತೆಗೆದಿಟ್ಟುಕೊಂಡರೆ ತಿಂಗಳುಗಟ್ಟಲೆ ಇದನ್ನು ಉಪಯೋಗಿಸಬಹುದು.

ಈಗ ಟೊಮೊಟೊ ರಸಂ ಮಾಡುವ ಬಗೆಯನ್ನು ನೋಡೋಣ.

ಮೊದಲು ಒಂದು ಪಾತ್ರೆಗೆ ಒಂದೆರಡು ಲೋಟ ನೀರನ್ನು ಹಾಕಿ, ಅದಕ್ಕೆ ತೊಳೆದ ಟೊಮೊಟೊ ಹಾಕಿ ಕುದಿಸಿ. ಐದಾರು ನಿಮಿಷಕ್ಕೆ ಟೊಮೊಟೊ ಹಣ್ಣು ಬೇಯುತ್ತದೆ. ಸ್ಟವ್ ಆರಿಸಿ, ಟೊಮೊಟೊ ಹಣ್ಣನ್ನು ಈಚೆ ತೆಗೆದು, ಅದರ ಸಿಪ್ಪೆಯನ್ನು ತೆಗೆದುಹಾಕಿ ಬಿಡಿ.

Tomato Rasam ingredients
Tomato Rasam tomato bake

ಈಗ ಮಿಕ್ಸರ್ ಜಾರ್ ಗೆ ತೆಂಗಿನ ಕಾಯಿ ತುರಿ, 2 ಚಮಚ ರಸಂ ಪುಡಿ, ಸಿಪ್ಪೆ ತೆಗೆದ ಟೊಮೊಟೊ ಹಣ್ಣನ್ನು ಹಾಕಿಕೊಂಡು ಸಾಕಷ್ಟು ನೀರಿನೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ.

Tomato Rasam Mixer

ಈ ರುಬ್ಬಿದ ಮಸಾಲೆಯನ್ನು ಒಂದು ಪಾತ್ರೆಗೆ ಹಾಕಿ ಇನ್ನೂ ಸ್ವಲ್ಪ ನೀರು, ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲವನ್ನು ಹಾಕಿ. ಜೊತೆಗೆ ತೊಳೆದ ಕರಿಬೇವಿನ ಸೊಪ್ಪನ್ನೂ ಹಾಕಿ ಸ್ಟವ್ ಮೇಲೆ ಕುದಿಯಲು ಇಡಿ.

ಇದು ಚೆನ್ನಾಗಿ ಕುದ್ದಾಗ, ಸಣ್ಣಗೆ ಹೆಚ್ಚಿದ ಕೊತ್ತುಂಬರಿ ಸೊಪ್ಪನ್ನು ಹಾಕಿ ಪಾತ್ರೆಯನ್ನು ಕೆಳಗಿಳಿಸಿ.

ಈಗ ಒಗ್ಗರಣೆ ಬಟ್ಟಲನ್ನು ಸ್ಟವ್ ಮೇಲಿಟ್ಟು ಅದಕ್ಕೆ ಒಂದು ಚಮಚ ತುಪ್ಪವನ್ನು ಹಾಕಿ ಜೀರಿಗೆ, ಸಾಸಿವೆಕಾಳನ್ನು ಹಾಕಿ. ಸಾಸಿವೆ ಹಾಳು ಸಿಡಿದಾಗ (ಬೇಕಿದ್ದಲ್ಲಿ) ಇಂಗನ್ನು ಹಾಕಿ ಈ ಒಗ್ಗರಣೆಯನ್ನು ರಸಂ ಗೆ ಹಾಕಿ. ಸ್ವಾದಿಷ್ಟವಾದ, ಘಂ ಎನ್ನುವ ಟೊಮೊಟೊ ಹಣ್ಣಿನ ರಸಂ ಸವಿಯಲು ಸಿದ್ಧ.