ಅಬಾಲ ವೃದ್ಧರಿಗೂ ಹಾಲುಬಾಯಿ ಎಂದರೆ ಬಲು ಪ್ರೀತಿ. ತಿನ್ನಲು ಬಲು ಮೃದುವಾಗಿದ್ದು, ಸುಲಭದಲ್ಲಿ ಜೀರ್ಣವಾಗುವಂತಹುದು ಈ ಹಾಲುಬಾಯಿ. ಈಗಾಗಲೇ ರಾಗಿ ಹಾಲುಬಾಯಿ, ರವೆ ಹಾಲುಬಾಯಿ, ಹಾಲು ಸೋರೆಕಾಯಿ ಹಾಲುಬಾಯಿಯನ್ನು ಮಾಡುವ ವಿಧಾನವನ್ನು ಪೋಸ್ಟ್ ಮಾಡಿದ್ದೇನೆ. ಈಗ ಅವಲಕ್ಕಿ ಹಾಲುಬಾಯಿಯ ಸರದಿ. ಬಹಳ ಕಡಿಮೆ ಪದಾರ್ಥಗಳನ್ನುಪಯೋಗಿಸಿ ಸ್ವಾದಿಷ್ಟವಾಗಿ ಮಾಡುವಂತಹಾ ಅವಲಕ್ಕಿ ಹಾಲುಬಾಯಿಯನ್ನು ಹೇಗೆ ಮಾಡುವುದು ಎಂದು ನೋಡೋಣವೇ?

ಬೇಕಾಗುವ ಪದಾರ್ಥಗಳು:

Avlaki halboy ingredients

ತೆಳು ಅವಲಕ್ಕಿ- 2 ಲೋಟ (ಮೀಡಿಯಂ ಅಳತೆಯ ಲೋಟ)

ಪುಡಿ ಮಾಡಿದ ಬೆಲ್ಲ- 1 ಲೋಟ

ಕಾಯಿತುರಿ- 1 ಲೋಟ

ಯಾಲಕ್ಕಿ- 6-8

ಗೋಡಂಬಿ (ಬೇಕಿದ್ದಲ್ಲಿ)-6-8

ತುಪ್ಪ- 2 ಚಮಚ

ಉಪ್ಪು-2 ಚಿಟಕಿ

ಮಾಡುವ ವಿಧಾನ:

ಮೊದಲು ತೆಳು ಅವಲಕ್ಕಿಯನ್ನು ಎರಡು ಲೋಟ ಅಳೆದುಕೊಂಡು, ಅದನ್ನು ಮಿಕ್ಸರ್ ಜಾರ್ ಗೆ ಹಾಕಿ ಪುಡಿ ಮಾಡಿ ಒಂದು ಬಟ್ಟಲಿಗೆ ಹಾಕಿ ತೆಗೆದಿಡಿ.

Avlakki halboy avlakki mixer clg

ನಂತರ ಅದೇ ಜಾರ್ ಗೆ ಒಂದು ಲೋಟ ಕಾಯಿ ತುರಿ ಮತ್ತು ಒಂದು ಲೋಟ ಬೆಲ್ಲವನ್ನು ಹಾಕಿ ನೀರು ಹಾಕದೆ ನುಣ್ಣಗೆ ರುಬ್ಬಿಕೊಳ್ಳಿ.

Avlaki halboy kayi bella mix

ಈಗ ದಪ್ಪ ತಳದ ಬಾಣಲೆಗೆ ಪುಡಿ ಮಾಡಿದ ಅವಲಕ್ಕಿಯನ್ನು ಮತ್ತು ಜಾರ್ ನಲ್ಲಿರುವ ಕಾಯಿ-ಬೆಲ್ಲದ ಮಿಶ್ರಣವನ್ನು ಹಾಕಿ. ಒಂದೂವರೆ ಲೋಟದಷ್ಟು ನೀರಿನಲ್ಲಿ ಮಿಕ್ಸರ್ ಜಾರನ್ನು ತೊಳೆದು ಆ ನೀರನ್ನೂ ಬಾಣಲೆಗೆ ಹಾಕಿ ಅದನ್ನು ಸ್ಟವ್ ಮೇಲಿಟ್ಟು ಕೈ ಮಗುಚಿ.

Avlaki halboy banale

Avlaki halboy fry

ಸುಮಾರು 5-6 ನಿಮಿಷಗಳ ಕಾಲ ಕೈ ಮಗುಚಿದಾಗ ಅದು ಗಟ್ಟಿಯಾಗಿ ಪ್ಲೇಟ್ ಗೆ ಹಾಕುವ ಹದ ಬರುತ್ತದೆ. ಆಗ ಆ ಮಿಶ್ರಣಕ್ಕೆ ಎರಡು ಚಮಚ ತುಪ್ಪವನ್ನೂ, ಯಾಲಕ್ಕಿ ಪುಡಿಯನ್ನೂ ಹಾಕಿ, ಮತ್ತೊಮ್ಮೆ ಕೈ ಮಗುಚಿ, ಮೊದಲೇ ತುಪ್ಪ ಸವರಿದ ತಟ್ಟೆಗೆ ಅದನ್ನು ಹಾಕಿ. ಒಂದು ಸಟ್ಟುಗದಿಂದ (ಸ್ಪಾಚುಲಾ) ಒಂದೇ ಸಮನೆ ಬರುವಂತೆ ಮಾಡಿ ಅಥವಾ ಕೈಯಲ್ಲಿಯೇ ತಟ್ಟಿ ಒಂದೇ ಸಮನೆ ಬರುವಂತೆ ಮಾಡಿ.

Avlaki halboy Plate

ಹತ್ತು ನಿಮಿಷಗಳ ನಂತರ ಅದು ತಣಿದಾಗ ನಿಮಗೆ ಬೇಕಾದ ಆಕಾರ, ಗಾತ್ರಕ್ಕನುಗುಣವಾಗಿ ಕತ್ತರಿಸಿ. ಬೇಕೆಂದಲ್ಲಿ ಗೋಡಂಬಿಯ ಚೂರುಗಳನ್ನು ಸ್ವಲ್ಪ ತುಪ್ಪದಲ್ಲಿ ಹುರಿದು ಕತ್ತರಿಸಿದ ಹಾಲುಬಾಯಿ ಪೀಸ್ ನ ಮಧ್ಯದಲ್ಲಿಟ್ಟು ಒತ್ತಿರಿ.

Avlaki Halboy last pic

ಸ್ವಾದಿಷ್ಟವಾದ ಅವಲಕ್ಕಿ ಹಾಲುಬಾಯಿ ಸವಿಯಲು ಸಿದ್ಧ. ಬೇಕೆಂದಲ್ಲಿ ಸ್ವಲ್ಪ ತುಪ್ಪವನ್ನು ಹಾಲುಬಾಯಿಯ ಮೇಲೆ ಹಾಕಿ ನಂತರ ಸರ್ವ್ ಮಾಡಿ.

ಸೂಚನೆ:

1. ಮೇಲೆ ಹೇಳಿದ ಪ್ರಮಾಣದಲ್ಲಿ ಪದಾರ್ಥಗಳನ್ನು ತೆಗೆದುಕೊಂಡರೆ ಸುಮಾರು 15-16 ಹಾಲುಬಾಯಿ ಪೀಸ್ ಗಳಾಗುತ್ತದೆ.

2. ಫ್ರಿಜ್ ನ ಹೊರತಾಗಿ ಮರುದಿನವೂ ಇಟ್ಟು ಇದನ್ನು ಉಪಯೋಗಿಸಬಹುದು.