ಬ್ರೆಡ್ ಎಂದಾಕ್ಷಣ ತಟ್ಟನೆ ನೆನೆಪಾಗುವುದು ಜಾಮ್. ಅಬಾಲವೃದ್ಧರಿಗೂ ಪ್ರಿಯವಾಗುವ ಜಾಮ್ ನ್ನು ಮನೆಯಲ್ಲಿಯೇ ಬಹಳ ಕಡಿಮೆ ಸಮಯದಲ್ಲಿ ತಯಾರಿಸಬಹುದು. ಚಪಾತಿ, ದೋಸೆ, ರೊಟ್ಟಿ ಇಂತಹಾ ತಿನಿಸುಗಳಿಗೆ ನೆಂಚಿಕೊಳ್ಳಲು ಬಹಳ ರುಚಿಯಾಗಿರುತ್ತದೆ.

ಜಾಮ್ ತಯಾರಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯವೆಂದರೆ, ಅತೀಯಾಗಿ ಕಳಿತ ಹಣ್ಣುಗಳನ್ನು ಜಾಮ್ ತಯಾರಿಸಲು ಬಳಸುವುದು ಸೂಕ್ತವಲ್ಲ. ಹಣ್ಣಾಗಿರಬೇಕು, ಆದರೆ ಅತೀಯಾಗಿ ಮೆತ್ತಗಿರಬಾರದು. ವಿಪರೀತವಾಗಿ ಕಳಿತಿದ್ದರೆ, ಜಾಮ್ ಸ್ವಲ್ಪ ದಿನವಾಗುತ್ತಿದ್ದ ಹಾಗೆ ಹುಳಿ ಬಂದುಬಿಡುತ್ತದೆ. ಬನ್ನಿ, ನೋಡೋಣ ಪಪ್ಪಾಯಿ ಹಣ್ಣಿನ ಜಾಮ್
ಮಾಡುವ ವಿಧಾನವನ್ನು.

ಬೇಕಾಗುವ ಪದಾರ್ಥಗಳು:

Papaya Jam papayaPapaya Jam sugarlemon

ಪಪ್ಪಾಯಿ 1 ಕೆ.ಜಿ ಯಷ್ಟು ದೊಡ್ಡದು

ಸಕ್ಕರೆ- 1 ಮೀಡಿಯಂ ಅಳತೆ ಲೋಟ

ನಿಂಬೆಹಣ್ಣಿನ ರಸ- 2 ಚಮಚ

ಮಾಡುವ ವಿಧಾನ:

ಮೊದಲು ಹಣ್ಣನ್ನು ಚೆನ್ನಾಗಿ ತೊಳೆದು ಸಿಪ್ಪೆ ಮತ್ತು ಬೀಜವನ್ನು ತೆಗೆದುಹಾಕಿ, ಹೋಳುಗಳನ್ನಾಗಿ ಮಾಡಿಕೊಳ್ಳಿ.

Papaya Jam hoLu

ಆ ಹೋಳುಗಳನ್ನು ಮಿಕ್ಸರ್ ಜಾರ್ ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. (ಸ್ವಲ್ಪವೂ ನೀರು ಸೇರಿಸಬಾರದು).

Papaya Jam grind

ಅವನ್ನೆಲ್ಲಾ ಫ್ರೈಯಿಂಗ್ ಪ್ಯಾನ್ ಗೆ ಹಾಕಿ. ಸ್ಟವ್ ಹೊತ್ತಿಸಿ, ಫ್ರೈಯಿಂಗ್ ಪ್ಯಾನ್ ಇಟ್ಟು ಕೈ ಆಡಿಸುತ್ತಿರಿ. ಸ್ವಲ್ಪ ಸಮಯದ ನಂತರ ಅಳೆದಿಟ್ಟ ಸಕ್ಕರೆಯನ್ನು ಹಾಕಿ.

Papaya Jam stir 1

ಸುಮಾರು 10-12 ನಿಮಿಷಗಳ ನಂತರ ಅದು ಗಟ್ಟಿಯಾಗುತ್ತಾ ಬರುತ್ತದೆ. ಆಗ ಬೀಜ ತೆಗೆದ ನಿಂಬೆರಸವನ್ನು ಹಾಕಿ ಕೈ ಮಗುಚಿ.

Paaya Jam stir 2

ಇನ್ನೇನು ಸ್ಟವ್ ನ್ನು ಆರಿಸಬಹುದು ಎನಿಸಿದಾಗ ಒಂದು ಕಡಲೆಕಾಯಿ ಬೀಜದ ಗಾತ್ರದಷ್ಟು ಜಾಮ್ ನ್ನು ನೀರು ತುಂಬಿದ ಒಂದು ಲೋಟಕ್ಕೆ ಹಾಕಿ ನೋಡಿ. ಅದು ಮೇಲಕ್ಕೆ ಬರದೆ ಲೋಟದ ತಳ ಭಾಗದಲ್ಲಿಯೇ ಉಳಿದರೆ ಜಾಮ್ ಹದ ಬಂದಿದೆಯೆಂದು ತಿಳಿಯಿರಿ. ಈಗ ಸ್ಟವ್ ನ್ನು ಆರಿಸಿ.

Papaya Jam bowl

ರುಚಿಕರವಾದ ಪಪ್ಪಾಯಿ ಹಣ್ಣಿನ ಜಾಮ್ ಸಿದ್ಧ. ಇದು ಪೂರ್ತಿಯಾಗಿ ತಣಿದಾಗ ಶುಭ್ರವಾದ ಗಾಜಿನ ಸೀಸೆಗೆ ಹಾಕಿ ತೆಗೆದಿಟ್ಟರೆ ಒಂದು ತಿಂಗಳುಗಳ ಕಾಲ ಉಪಯೋಗಿಸಬಹುದು.