ದಂಟಿನ ಸೊಪ್ಪಿನಲ್ಲಿ ಎರಡು ಬಗೆಗಳಿವೆ. ಕೆಂಪು ಮತ್ತು ಬಿಳಿ ದಂಟು ಎಂದು. ಕೆಂಪು ಬಣ್ಣದ ದಂಟಿನ ಸೊಪ್ಪು ರುಚಿಕರ. ನಾರಿನಂಶದಿಂದ ಕೂಡಿರುವ ಕೆಂಪು ಹರಿವೆ ಸೊಪ್ಪಿನಿಂದ ಮಾಡುವ ಪದಾರ್ಥಗಳು ತಿನ್ನಲು ರುಚಿಕರವಷ್ಟೇ ಅಲ್ಲ ಆರೋಗ್ಯಕರ ಕೂಡ. ಪ್ರೊಟೀನ್ ವಿಟಮಿನ್ಸ್, ಐರನ್, ಮಿನರಲ್ಸ್ ಅಂಶಗಳನ್ನು ಹೊಂದಿರುವ ಈ ಸೊಪ್ಪನ್ನು ಅಡುಗೆಯಲ್ಲಿ ಬಳಸಿ ನಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಮಲಬದ್ಧತೆ, ರಕ್ತಹೀನತೆಗೆ ಉತ್ತಮ ಪಥ್ಯಾಹಾರವಿದು. ತಂಪು ಗುಣವನ್ನು ಹೊಂದಿರುವ ಈ ಸೊಪ್ಪಿನಲ್ಲಿ ರೋಗ ನಿರೋಧಕ ಶಕ್ತಿಯೂ ಇದೆ.

ಎಳೆ ಕೆಂಪು ಹರಿವೆ ಸೊಪ್ಪನ್ನು ಬಳಸಿ ಮಾಡುವ ಮೊಸರು ಸಾಸಿವೆ ಹೇಗೆಂದು ನೋಡೋಣ.

ಬೇಕಾಗುವ ಪದಾರ್ಥಗಳು:

Harive Soppu

ಕೆಂಪು ಹರಿವೆಸೊಪ್ಪು- 3 ಕಟ್ಟು

ತೆಂಗಿನ ತುರಿ- ಒಂದು ಹಿಡಿಯಷ್ಟು

ಮೊಸರು- ಒಂದು ಲೋಟ

ಹಸಿ ಮೆಣಸಿನ ಕಾಯಿ- 3

ಸಾಸಿವೆ ಕಾಳು- ಅರ್ಧ ಚಮಚ

ಒಗ್ಗರಣೆಗೆ ತುಪ್ಪ: ಅರ್ಧ ಚಮಚ

ಮಾಡುವ ವಿಧಾನ:

Harive Sasive Soppu cuted

ಸೊಪ್ಪನ್ನು ಬಿಡಿಸಿ ನೀರಿನಲ್ಲಿ ಚೆನ್ನಾಗಿ ತೊಳೆದು, ಸಣ್ಣಗೆ ಹೆಚ್ಚಿಕೊಳ್ಳಿ.

ಸ್ಟವ್ ಹೊತ್ತಿಸಿ ಫ್ರೈಯಿಂಗ್ ಪ್ಯಾನ್ ಇಟ್ಟು ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಿ ಸಾಸಿವೆ ಕಾಳು ಹಾಕಿ. ಅದು ಸಿಡಿದಾಗ ಹೆಚ್ಚಿಟ್ಟ ಸೊಪ್ಪನ್ನು ಹಾಕಿ ಒಂದೆರಡು ನಿಮಿಷ ಹುರಿಯಿರಿ. ನಂತರ ಸ್ವಲ್ಪವೇ ನೀರು ಹಾಕಿ ಸೊಪ್ಪನ್ನು ಬೇಯಿಸಿಕೊಳ್ಳಿ. ನಂತರ ಸ್ಟವ್ ಆರಿಸಿ.

Harive Soppu fry

ಈಗ ತೆಂಗಿನ ತುರಿ, ಹಸಿಮೆಣಸಿನ ಕಾಯಿ, ಸಾಸಿವೆ ಕಾಳನ್ನು ಮಿಕ್ಸರ್ ಜಾರ್ ಗೆ ಹಾಕಿ ಸ್ವಲ್ಪವೇ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ.

Harive Sasive Mixer

ಒಂದು ಪಾತ್ರೆಗೆ ರುಬ್ಬಿದ ಭಾಗವನ್ನೂ, ಮೊಸರನ್ನೂ ಹಾಕಿ. ಅದಕ್ಕೆ ಬೇಯಿಸಿ ತಣಿದ ಸೊಪ್ಪನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ.

ಒಗ್ಗರಣೆ ಬಟ್ಟಲಿಗೆ ಸ್ವಲ್ಪ ತುಪ್ಪವನ್ನು ಹಾಕಿ, ಸಾಸಿವೆ ಕಾಳು ಹಾಕಿ ಸಿಡಿದಾಗ ಆ ಒಗ್ಗರಣೆಯನ್ನು ಮೇಲಿನ ಮೊಸರು ಸಾಸಿವೆಗೆ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ರುಚಿಕರ, ಆರೋಗ್ಯಕರವಾದ ಕೆಂಪು ಹರಿವೆ ಸೊಪ್ಪಿನ ಸಾಸಿವೆ ಸಿದ್ಧ. ಊಟದಲ್ಲಿ ಮೊದಲ ಪದಾರ್ಥವಾಗಿ ಇದನ್ನು ಬಳಸಿ.