“ಯುಕ್ತಾಹಾರ ವಿಹಾರಸ್ಯ ಯುಕ್ತ ಚೇಷ್ಟಸ್ಯ ಕರ್ಮಸು” (ಗೀತೆ ಅ.6.7)-  ಭಗವದ್ಗೀತೆಯಲ್ಲಿ ಶ್ರೀಕೃಷ್ಣ,  ಯುಕ್ತವಾದ ಆಹಾರವನ್ನೇ ಸೇವಿಸಬೇಕು ಎಂದಿದ್ದಾನೆ. ಯುಕ್ತಾಹಾರವೆಂದರೆ ಮಿತಾಹಾರವಲ್ಲ. ಹಿತಾಹಾರ.

ಆಹಾರ ಹಿತವಾಗಿದ್ದರೆ ಮೈ ಮನಸ್ಸು ಶುದ್ಧವಾಗಿರುತ್ತದೆ. ‘ಆಹಾರ ಶುದ್ಧೌ ತತ್ವ ಶುದ್ಧಿ:’ ಸಹಜ ಸತ್ವ ಗುಣಯುಕ್ತ ಆಹಾರ ಸೇವನೆ ಮಾಡಬೇಕು. ಹಾಗಾಗಿ ನಾವೇ ಕೈಯಾರೆ ಪ್ರೀತಿಯಿಂದ, ರುಚಿ-ಶುಚಿಯಾಗಿ ಅಡುಗೆ-ತಿಂಡಿಗಳನ್ನು ಮನೆಯಲ್ಲೆ ತಯಾರು ಮಾಡುವುದು ಒಳಿತಲ್ಲವೆ?

‘ರವೆ ಇಡ್ಲಿ’  ಎಂದಾಕ್ಷಣ ಸಾಮಾನ್ಯವಾಗಿ ಅಂಗಡಿಯಿಂದ ತಂದ ಪ್ಯಾಕ್‍ನ್ನು ತೆರೆದು ಅಲ್ಲಿರುವ ಮಾಹಿತಿಯಂತೆ ಇಡ್ಲಿಯನ್ನು ತಯಾರಿಸುವವರೇ ಜಾಸ್ತಿಯಾಗಿದ್ದಾರೆ. ಬಹಳ ಕಡಿಮೆ ಸಮಯದಲ್ಲಿ, ಬಹಳ ಸುಲಭವಾಗಿ ರುಚಿ-ಶುಚಿಯಾಗಿ ನಾವೇ ರವೆ ಇಡ್ಲಿಯನ್ನು ಮನೆಯಲ್ಲಿ ಮಾಡಬಹುದೆಂದು ಸಾಕಷ್ಟು ಜನರಿಗೆ ತಿಳಿದಿಲ್ಲ. ಹಾಗಾದರೆ ಬನ್ನಿ ನೋಡೋಣ ಹೇಗೆ ಮಾಡುವುದು ಎಂದು?

(ಗುಜರಾತ್ ನ ಸಾಂಪ್ರದಾಯಕ ತಿನಿಸಾದ ‘ಡೋಕ್ಲ’ – ಇದರ ರೆಸಿಪಿಗೆ ಇಲ್ಲಿ ಕ್ಲಿಕ್ ಮಾಡಿ)

ಬೇಕಾಗುವ ಪದಾರ್ಥಗಳು:

ಚಿರೋಟಿ (ಬಾಂಬೆ) ರವೆ- 2 ದೊಡ್ಡ (ಜ್ಯೂಸ್)ಲೋಟ

ಮೊಸರು- ಎರಡೂವರೆ ದೊಡ್ಡ ಲೋಟ

ಕ್ಯಾರೆಟ್-1

ಕೊತ್ತುಂಬರಿ ಸೊಪ್ಪು- ಅರ್ಧ ಕಟ್ಟು

ತೆಂಗಿನಕಾಯಿಯ ಹೆಚ್ಚಿದ ತುಂಡುಗಳು- 1 ಹಿಡಿ

ಒಗ್ಗರಣೆಗೆ ಎಣ್ಣೆ- 3 ಚಮಚ

ಕಡಲೆ ಬೇಳೆ- 1 ಚಮಚ

ಉದ್ದಿನ ಬೇಳೆ- ಅರ್ಧ ಚಮಚ

ಸಾಸಿವೆ- ಕಾಲು ಚಮಚ

ಉಪ್ಪು- ರುಚಿಗೆ ತಕ್ಕಷ್ಟು

ಅಡುಗೆ ಸೋಡ- ಚಿಟಕಿ

ಗೋಡಂಬಿ(ಬೇಕೆಂದಲ್ಲಿ)-8-10

ಮಾಡುವ ವಿಧಾನ:

ದಪ್ಪ ತಳದ ಪ್ಯಾನ್ ನ್ನು ಸ್ಟವ್ ಮೇಲಿಟ್ಟು 3 ಚಮಚ ಎಣ್ಣೆ ಹಾಕಿ. ಕಾದಾಗ ಕಡಲೆಬೇಳೆ, ಉದ್ದಿನಬೇಳೆ, ಗೋಡಂಬಿ, ಸಾಸಿವೆ ಕಾಳು ಹಾಕಿ ಅದು ಸಿಡಿದಾಗ ರವೆಯನ್ನು ಹಾಕಿಕೊಂಡು ಸಣ್ಣ ಉರಿಯಲ್ಲಿ ಒಂದೈದು ನಿಮಿಷಗಳ ಕಾಲ ಹುರಿಯಿರಿ. ರವೆಯು ತುಂಬಾ ಕೆಂಪಗಾಗಬಾರದು.

Pic 1

ನಂತರ ಅದನ್ನು ಬೇರೊಂದು ಪಾತ್ರೆಗೆ ಹಾಕಿ. ರವೆಯು ಸಂಪೂರ್ಣವಾಗಿ ತಣಿದ ನಂತರ ಅದಕ್ಕೆ ಸ್ವಲ್ಪ ಹುಳಿಯಾದ, ಗಟ್ಟಿ ಮೊಸರನ್ನು ಹಾಕಿ ಗಂಟಿಲ್ಲದಂತೆ ಕಲಸಿಕೊಳ್ಳಿ. ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾಯಿಯ ಪೀಸ್ ಗಳನ್ನು ಹಾಕಿ ಬದಿಯಲ್ಲಿಡಿ.

Pic 2

ಕ್ಯಾರೆಟ್ ತೊಳೆದು, ಸಿಪ್ಪೆ ತೆಗೆದು ತುರಿದುಕೊಳ್ಳಿ. ಕೊತ್ತುಂಬರಿ ಸೊಪ್ಪನ್ನು ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ. ನಂತರ ಕಲಸಿದ ಇಡ್ಲಿ ಹಿಟ್ಟಿಗೆ ಚಿಟಕಿ ಸೋಡವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

Pic 3

ಕುಕ್ಕರ್ ತಳ ಭಾಗಕ್ಕೆ ನೀರನ್ನು ಹಾಕಿ ಸ್ಟವ್ ಮೇಲಿಡಿ. ಇಡ್ಲಿ ಸೆಟ್‍ಗೆ ಸ್ವಲ್ಪ ಎಣ್ಣೆಯನ್ನು ಸವರಿ ಹಿಟ್ಟನ್ನು ಹಾಕುವ ಮೊದಲು ಕ್ಯಾರೆಟ್ ತುರಿ, ಕೊತ್ತುಂಬರಿ ಸೊಪ್ಪು, ಗೋಡಂಬಿಯನ್ನು ಹಾಕಿ, ಅದರ ಮೇಲೆ ಹಿಟ್ಟನ್ನು ಹಾಕಿ ಸಿದ್ಧ ಮಾಡಿಕೊಳ್ಳಿ.

Pic 4

ಕುಕ್ಕರ್ ತಳಭಾಗದಲ್ಲಿ ಹಾಕಿದ ನೀರು ಕುದಿಯಲು ಪ್ರಾರಂಭಿಸಿದಾಗ ಸಿದ್ಧ ಮಾಡಿದ ಇಡ್ಲಿ ಸೆಟ್‍ನ್ನು ಒಳಗಿಟ್ಟು ಮುಚ್ಚಳದ ಮೇಲೆ ಒಂದು ಲೋಟ ಮುಚ್ಚಿ, 10-12 ನಿಮಿಷಗಳ ಕಾಲ ಬೇಯಿಸಿ. ಸ್ಟವ್ ಆರಿಸಿ.

ಮತ್ತೆ 10 ನಿಮಿಷಗಳ ನಂತರ ಕುಕ್ಕರ್ ಮುಚ್ಚಳ ತೆಗೆದಾಗ ಮೃದುವಾದ, ರುಚಿಕರ ರವೆ ಇಡ್ಲಿ ತಯಾರು. ಕಾಯಿ ಅಥವಾ ಕೊತ್ತುಂಬರಿ ಸೊಪ್ಪಿನ ಚಟ್ನಿಯೊಂದಿಗೆ ತಿನ್ನಲು ಕೊಡಿ. ಬೇಕೆಂದಲ್ಲಿ ಸಾಗುವನ್ನೂ ಮಾಡಿ. (ಸಾಗುವಿನ ರೆಸಿಪಿಗೆ ಇಲ್ಲಿ ಕ್ಲಿಕ್ ಮಾಡಿ)

Pic 5

ಸೂಚನೆ:

1. ಮೇಲೆ ಹೇಳಿದ ಪ್ರಮಾಣದಲ್ಲಿ ರವೆ-ಮೊಸರನ್ನು ಉಪಯೋಗಿಸಿದಲ್ಲಿ ಸುಮಾರು 16 ಇಡ್ಲಿಗಳಾಗುತ್ತವೆ.

2. ಮೇಲೆ ತಿಳಿಸಿದಂತೆ ರವೆಯನ್ನು ಹುರಿಯುವ ಬದಲು, ಒಂದು ಮಲ್ ಬಟ್ಟೆಗೆ ಹಸಿ ರವೆಯನ್ನು ಹಾಕಿ, ಗಂಟು ಕಟ್ಟಿ ಕುಕ್ಕರ್ ನಲ್ಲಿ 8-10 ನಿಮಿಷಗಳ ಕಾಲ ಇಡ್ಲಿಯಂತೆಯೇ ಬೇಯಿಸಿ, ಅದು ಪೂರ್ತಿ ತಣೆದಾಗ ಅದಕ್ಕೆ ಮೊಸರು, ಒಗ್ಗರಣೆ, ಉಪ್ಪು ಮತ್ತು ಅಡುಗೆ ಸೋಡ ಹಾಕಿಯೂ ಹಿಟ್ಟನ್ನು ಸಿದ್ಧ ಮಾಡಿಕೊಳ್ಳುವ ಕ್ರಮವೂ ಇದೆ.