ಹಾಲಿನ ಉತ್ಪನ್ನವಾದ ಪನ್ನೀರ್- ಪ್ರೊಟೀನ್, ಕ್ಯಾಲ್ಸಿಯಂ ಅಂಶವನ್ನು ಹೊಂದಿದ್ದು, ಆಗಾಗ ಇದನ್ನು ಬಳಸಿ ಇದರಲ್ಲಿನ ಆರೋಗ್ಯ ಲಾಭವನ್ನು ಪಡೆಯಬಹುದಾಗಿದೆ. ಇದರಲ್ಲಿ ಪಾಸ್ಪರಸ್, ವಿಟಮಿನ್ಸ್, ಮಿನರಲ್ಸ್ ಇದ್ದು ಮೂಳೆಗಳ ಬೆಳವಣಿಗೆಗೆ ಬಹಳ ಒಳ್ಳೆಯದೆನ್ನಬಹುದು. ಅಷ್ಟೇ ಅಲ್ಲ, ಇದು ಒಮೆಗಾ-3, ಒಮೆಗಾ-6 ಫ್ಯಾಟಿ ಆಸಿಡ್ ಹೊಂದಿರುವುದಲ್ಲದೆ, ಇದುಕ್ಯಾಲ್ಸಿಯಂ ಜೊತೆಗೆ ವಿಟಮಿನ್- ಡಿ ಅಂಶವನ್ನು ಹೊಂದಿರುವುದರಿಂದ ಹಲ್ಲುಗಳ, ಒಸಡುಗಳ ಆರೋಗ್ಯವನ್ನೂ ಕಾಪಾಡುತ್ತದೆ.

ಮಕ್ಕಳಿಗಂತೂ ಬಹಳ ಪ್ರಿಯ ಈ ಪನ್ನೀರ್. ಇಷ್ಟೆಲ್ಲಾ ಆರೋಗ್ಯ ಲಾಭವನ್ನು ಹೊಂದಿರುವ ಇದನ್ನು ಬಳಸಿ ಮಾಡುವ ಬೋಂಡದ ರೆಸಿಪಿ ಇಂತಿದೆ. (ಪನ್ನೀರ್ ಕೋಲಿವಡ- ಈ ರೆಸಿಪಿಗೆ ಇಲ್ಲಿ ಕ್ಲಿಕ್ ಮಾಡಿ)

ಬೇಕಾಗುವ ಪದಾರ್ಥಗಳು:

Pic 1

ಪನ್ನೀರ್- 150 ಗ್ರಾಂ

ಕಡಲೆ ಹಿಟ್ಟು- ಒಂದು ಲೋಟ(ಮೀಡಿಯಂ ಲೋಟ)

ಅಕ್ಕಿ ಹಿಟ್ಟು- ಅರ್ಧ ಲೋಟ

ಕೆಂಪು ಮೆಣಸಿನಕಾಯಿ ಪುಡಿ- 2-3 ಚಮಚ

ಓಮದ ಕಾಳು- ಕಾಲು ಚಮಚ

ಇಂಗು- 1 ಕಡಲೆಬೇಳೆ ಗಾತ್ರ/ಕಾಲು ಚಮಚ

ನಿಂಬೆರಸ- 4-5 ಹನಿಗಳು

ಉಪ್ಪು- ರುಚಿಗೆ ತಕ್ಕಷ್ಟು

ಎಣ್ಣೆ- ಕರಿಯಲು

ಮಾಡುವ ವಿಧಾನ:

ಒಂದು ಬೌಲ್ ನಲ್ಲಿ 5-6 ಚಮಚ ನೀರಿಗೆ ಗಟ್ಟಿ ಇಂಗನ್ನು ಹಾಕಿ ಕರಗಲು ಬಿಡಿ.

ಒಂದು ಪಾತ್ರೆಗೆ ಕಡಲೆ ಹಿಟ್ಟು ಮತ್ತು ಅಕ್ಕಿ ಹಿಟ್ಟನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು, ರೆಡ್ ಚಿಲ್ಲಿ ಪೌಡರ್ ಹಾಕಿ, ಮೇಲ್ಭಾಗದಲ್ಲಿ ಕಾಲು ಚಮಚ ಓಮದ ಕಾಳನ್ನು ಹಾಕಿ.

ಒಗ್ಗರಣೆಯ ಬಟ್ಟಲಿನಲ್ಲಿ 5-6 ಚಮಚದಷ್ಟು ಎಣ್ಣೆಯನ್ನು ಹಾಕಿ, ಅದನ್ನು ಹೊಗೆಯಾಡುವಂತೆ ಕಾಯಿಸಿ, ಹಿಟ್ಟಿನ ಮೇಲಿರುವ ಓಮದ ಕಾಳಿನ ಮೇಲೆ ಬರುವಂತೆ ಹಾಕಿ, ನಂತರ ಕಲಸಿ.

ಇಂಗಿನ ನೀರನ್ನು ಸೇರಿಸಿಕೊಂಡು ಮತ್ತೊಂದು ಲೋಟ ನೀರು ಹಾಕಿಕೊಂಡು ಸುಮಾರಾಗಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಕೊನೆಯಲ್ಲಿ ನಿಂಬೆರಸವನ್ನು ಸೇರಿಸಿ.

Pic 2

ಈಗ ಒಮ್ಮೆ ಪನ್ನೀರನ್ನು ತೊಳೆದುಕೊಂಡು ಚೌಕಾಕಾರದಲ್ಲಿ ಸ್ವಲ್ಪ ತೆಳ್ಳಗೆ ಚಿತ್ರದಲ್ಲಿ ತೋರಿಸಿರುವಂತೆ ಕತ್ತರಿಸಿಕೊಳ್ಳಿ.

Pic 3

ಪ್ಯಾನ್ ನಲ್ಲಿ ಎಣ್ಣೆಯನ್ನು ಕಾಯಲು ಇಟ್ಟು, ಅದು ಕಾದಾಗ, ಕತ್ತರಿಸಿಟ್ಟ ಪನ್ನೀರನ್ನು ಹಿಟ್ಟಿನಲ್ಲಿ ಅದ್ದಿ, ಎಣ್ಣೆಗೆ ಬಿಡಿ. ಮಧ್ಯದಲ್ಲಿ ಉರಿಯನ್ನು ಸ್ವಲ್ಪ ಕಡಿಮೆ ಮಾಡಿ ಮತ್ತೊಂದು ಭಾಗಕ್ಕೆ ಮಗುಚಿ ಹಾಕಿ. ಚೆನ್ನಾಗಿ ಬೆಂದ ನಂತರ ಈಚೆ ತೆಗೆಯಿರಿ.

ಸ್ವಾದಿಷ್ಟವಾದ ಬಿಸಿ ಬಿಸಿ ಪನ್ನೀರ್ ಬೋಂಡ ಸವಿಯಲು ಸಿದ್ಧ. ಟೊಮೊಟೊ ಕೆಚಪ್ ನೊಂದಿಗೆ ತಿನ್ನಲು ಕೊಡಿ.

Pic 4

ಇದೇ ಹಿಟ್ಟಿನಿಂದ ಈರುಳ್ಳಿ, ಹೀರೆಕಾಯಿ, ದಪ್ಪ ಮೆಣಸಿನ ಕಾಯಿಗಳನ್ನೂ ಉಪಯೋಗಿಸಿ ಬೋಂಡವನ್ನು ಮಾಡಬಹುದು.